ಕ್ಯಾಡ್ಮನ್

(ಮರಣ ಕ್ರಿ.ಶ ಸು.680? ) ಇಂಗ್ಲೆಂಡಿನ ಪ್ರಾಚೀನ ಕ್ರೈಸ್ತ ಕವಿಗಳಲ್ಲಿ ಮೊದಲಿಗ. ಇಂಗ್ಲಿಷ್ ಕವಿಗಳಲ್ಲೂ ಈತನೇ ಮೊದಲಿಗನೆನ್ನಲಾಗಿದೆ. ಬೀಡ್ ಬರೆದಿರುವ ಕ್ರೈಸ್ತ ಧರ್ಮದ ಚರಿತ್ರೆಯಲ್ಲಿ ಈತನ ಬಗ್ಗೆ ಮಾಹಿತಿ ದೊರೆಯುತ್ತದೆ. ವಿಟ್ಟಿಯ ಕ್ರೈಸ್ತಮಠದಲ್ಲಿದ್ದ ಈತ ಮಧ್ಯವಯಸ್ಕನಾಗುವವರೆಗೂ ಕಾವ್ಯರಚನೆಯಲ್ಲಿ ಆಸಕ್ತಿ ತೋರಲಿಲ್ಲ. ಒಮ್ಮೆ ಈತನ ಕನಸಿನಲ್ಲಿ ದೇವರು ಕಾಣಿಸಿಕೊಂಡು ತನ್ನ ಸಲುವಾಗಿ ಹಾಡಲು ಆಜ್ಞಾಪಿಸಿದನಂತೆ. ಅನಂತರ ಕ್ಯಾಡ್ಮನ್ ಜಗತ್ತಿನ ಸೃಷ್ಟಿ. ಮಾನವಕುಲದ ಆರಂಭ, ಸ್ವರ್ಗದ ದಿವ್ಯತೆ, ನರಕಶಿಕ್ಷೆಯ ದಾರುಣತೆಗಳನ್ನು ಕುರಿತು ಹಾಡಿದನಂತೆ. ಈ ಕವನಗಳಲ್ಲಿ ಉತ್ತಮ ಕಾವ್ಯಗುಣಗಳೇನೂ ಇಲ್ಲ; ವಿಷಯಕ್ಕಿಂತ ಹೆಚ್ಚು ಉದ್ಗಾರಗಳು. ಪುನರಾವೃತ್ತಿಗಳು. ಬಳಸು ಮಾತುಗಳು ಹೆಚ್ಚು ತುಂಬಿವೆ. ಅಲ್ಲದೆ ಅವೆಲ್ಲವೂ ಕ್ಯಾಡ್ಮನ್ನನ ಕೃತಿಗಳಲ್ಲವೆಂದೂ ಕಾಲಾನುಕಾಲಕ್ಕೆ ಅವು ಇತರರಿಂದ ಬಹುಮಟ್ಟಿಗೆ ತಿದ್ದಲ್ಪಟ್ಟಿವೆಯೆಂದೂ ವಿದ್ವಾಂಸರ ಅಭಿಪ್ರಾಯ.      	     (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ